ಬುಧವಾರ, ನವೆಂಬರ್ 1, 2017

ಶುಕ್ರವಾರ, ಆಗಸ್ಟ್ 18, 2017

ಮೌನದಿ ಕಂಪ  ಬೀರುತಿದೆ ಮಲ್ಲಿಗೆಯ ಮೊಗ್ಗು |
ಮಾತಿನಲೇ ಮನೆಯ ಕಟ್ಟುತಿಹವು ಜಾಣ ಗಿಳಿಗಳು||
ಮುಂಗಾರು ಮೋಡಗಳು ಮುಗಿಲಿನಿಂದ ಸರಿದು |
ಮೂಡಣದಲಿ ಮೂಡಿ ಬಂದಿಹುದು ಮಳೆಯಬಿಲ್ಲು|

ಹಿತವೆನಿಸಿರುವ ಈ ಹೊತ್ತಿನಲಿ ಹುಸಿನಗೆಯೆಕೆ|
ನನ್ನೀ ಪ್ರಶ್ನೆಗಳಿಗೆ ನಿನ್ನ ನಿರುತ್ತರವೇಕೆ||
ನಾಲ್ಕು ಹೆಜ್ಜೆ ಮುಂದೆ ನಡೆದರೇನು?|
ನಿನ್ನ ಮುಂಗುರುಳು ನನ್ನೇ ನೋಡುತಿಹುದು ಹಲವು ದಿನದ ಗೆಳೆತನವ ನೆನೆದು||

ನಿನ್ನದೇ ಧ್ಯಾನ,ನೀನೆ ಪ್ರಾಣ|
ನಿನ್ನ ನೆನೆಯುವುದ ಬಿಟ್ಟು ಬೇರೆನಿದೆ ಕೆಲಸ||
ನಿಷ್ಕ್ರಿಯಗೊಳಿಸು ನಿನ್ನ ಮುನಿಸ |
ನಗುಮೊಗದಿಂದ ಹಸನಾಗಿಸು ನನ್ನೀ ಮನಸನು||

ಅಭಿಲಾಷ್ ಟಿ ಬಿ
ತಿಪಟೂರು





ನಾರಾಯಣಪ್ಪನ ದೋಸೆ ಹೋಟೆಲ್......

ಸುಮಾರು ವರುಷಗಳ ಹಿಂದೆ,ಲಕ್ಷೀಪುರವೆಂಬ ಹಳ್ಳಿಯಲ್ಲಿ ನಾರಾಯಣಪ್ಪನೆಂಬುವನು ದೋಸೆ ಹೋಟೆಲ್ ಅನ್ನು ನಡೆಸುತ್ತಿದ್ದನು.ಊರಿನ ಜನ ಸಂಜೆಯಾಗುವುದೇ ಕಾಯುತ್ತಿದ್ದರು,ನಾರಾಯಣಪ್ಪನ ಹೋಟೆಲ್ ನ ಬಿಸಿ ಬಿಸಿ ಮಸಾಲೆ ದೋಸೆ,ಬೆಣ್ಣೆ ದೋಸೆ,ರವೆ ದೋಸೆ,ನೀರು ದೋಸೆಗಳನ್ನು ಸವಿಯಲು." ಇಂಥ ಬಾಳ ರುಚಿಯಿರೋ ದ್ವಾಸಿನ ನಾ ಎಲ್ಲೂ ತಿಂದಿಲ್ಲಾ ನೋಡಪ್ಪಾ" ಅಂತ ದೋಸೆ ತಿಂದವರು ಹೇಳುತ್ತಿದ್ದರು.ಅಂಥಾ ಸವಿಯಾದ ರುಚಿಯಾದ ಶುದ್ಧವಾದ ದೋಸೆಯನ್ನು ನಾರಾಯಣಪ್ಪ ಸ್ವತ: ತಾನೇ ಮಾಡುತ್ತಿದ್ದನು ಹಾಗೂ ಅವನ ಜೀವನವು ಹೋಟೆಲ್ ನಿಂದ ಬಂದ ಹಣದಿಂದಲೇ ನಡೆಯುತಿತ್ತು.

ನಾರಾಯಣಪ್ಪನಿಗೆ ಬರುಬರುತ್ತಾ ವಯಸ್ಸು ಏರುತ್ತಾ ಹೋಯಿತು .ಆದ್ದರಿಂದ ಅವನು ತನ್ನ ಹೋಟೆಲ್ ಮಾಲಿಕತ್ವವನ್ನು ತನ್ನ ಇಬ್ಬರು ಮಕ್ಕಳಾದ ರಾಮ ಮತ್ತೆ ಶ್ಯಾಮನಿಗೆ ಕೊಡಲು ನಿರ್ಧರಿಸಿದನು.ಅದಕ್ಕೂ ಮೊದಲು ನಾರಾಯಣಪ್ಪ ತನ್ನ ಇಬ್ಬರು ಮಕ್ಕಳಲ್ಲಿ ಹೋಟೆಲ್ ನಡೆಸುವುದಕ್ಕೆ ಯಾರು ಸಮರ್ಥರು ಎಂದು ತಿಳಿಯಬೇಕೆಂದು ನಿರ್ಧರಿಸಿದನು.

ನಾರಾಯಣಪ್ಪ ಒಂದು ದಿನ ತನ್ನ ಇಬ್ಬರೂ ಮಕ್ಕಳನ್ನು ಕರೆದು " ಮಕ್ಕಳ,ನನಗೆ ವಯಸ್ಸಾಯಿತು,ಈ ಖಾನಾವಳಿಯನ್ನು ನಿಮ್ಮಿಬ್ಬರ ಸುಪರ್ದಿಗೆ ಕೊಡಲು ನಿರ್ಧರಿಸಿದ್ದೇನೆ.ಅದಕ್ಕೂ ಮೊದಲು ,ನಾನು ರುಚಿಯಾಗಿ ದೋಸೆ ತಯಾರಿಸುವ. ವಿಧಾನವನ್ನು ನಿಮಗೆ ಹೇಳುತ್ತೇನೆ.ನೀವು ಬೇರೆ ಬೇರೆ ಊರುಗಳಲ್ಲಿ ಒಂದು ವರುಷ ವ್ಯಾಪಾರ ಮಾಡಿ,ಯಾರು ಹೆಚ್ಚು ಆದಾಯ ತರುತ್ತೀರೋ ,ಅವರಿಗೆ ನನ್ನ ಹೋಟೆಲ್ ನ ಜವಾಬ್ದಾರಿಯನ್ನು ವಹಿಸುತ್ತೇನೆ " ಎಂದು ಹೇಳಿದನು.ನಾರಾಯಣಪ್ಪ ತನ್ನ ಇಬ್ಬರೂ ಮಕ್ಕಳಿಗೂ ವಿಧ ವಿಧವಾಗಿ ರುಚಿ ರುಚಿಯಾಗಿ ದೋಸೆ ಮಾಡುವುದನ್ನು ಹೇಳಿಕೊಟ್ಟನು.
ತಂದೆಯಿಂದ ದೋಸೆ ಮಾಡುವುದನ್ನು ಕಲಿತ ರಾಮ ಮತ್ತೆ ಶ್ಯಾಮ ಬೇರೆ ಬೇರೆ ಊರುಗಳಲ್ಲಿ ದೋಸೆ ಹೋಟೆಲ್ ನ್ನು ಆರಂಭಿಸಿದರು.ಸುಮಾರು ಒಂದು ತಿಂಗಳ ಕಾಲ ಇಬ್ಬರ ಹೋಟೆಲ್ ನಲ್ಲೂ ಜನವೋ ಜನ ,ಇದನ್ನು ಕಂಡ ನಾರಾಯಣಪ್ಪನಿಗೂ ಆನಂದವೂ ಆಯಿತು.ಆದರೆ ಬರುಬರುತ್ತಾ ಶ್ಯಾಮನ ಹೋಟೆಲ್ ನಲ್ಲಿ ಜನವೇ ಇರುತ್ತಿರಲಿಲ್ಲ,ಇದ್ದರೆ  ಒಬ್ಬರೋ ಇಬ್ಬರೋ .ಆದರೆ ರಾಮನ ಹೋಟೆಲ್ ನಲ್ಲಿ ಮಾತ್ರ ಜನ ಕಿಕ್ಕಿರಿದು ತುಂಬಿರುತ್ತಿದ್ದರು.ಶ್ಯಾಮನ ಹೋಟೆಲ್ ನಲ್ಲಿ ಗಿರಾಕಿಗಳು ಯಾಕೆ ಕಡಿಮೆಯಾದರು ಎಂಬುದನ್ನು ತಿಳಿಯಲು ನಾರಾಯಣಪ್ಪ ಶ್ಯಾಮನ ಹೋಟೆಲ್ಗೆ ಒಮ್ಮೆ ಮಾರುವೇಷದಲ್ಲಿ ಹೋದನು.ನಾರಾಯಣಪ್ಪನು ಒಂದು ದೋಸೆಯನ್ನು ತೆಗೆದುಕೊಂಡು ತಿನ್ನುತ್ತಾ ಕುಳಿತ್ತಿದ್ದನು.ಅಲ್ಲೇ ಹತ್ತಿರದಲ್ಲಿ ದೋಸೆ ತಿನ್ನುತ್ತಿದ್ದ ಹೆಂಗಸೊಂದು ಶ್ಯಾಮನನ್ನು ಕುರಿತು " ತಮ್ಮಾ, ಬಾಳ ಛಲೋ ಮಾಡಿದ್ಯಾ ದೋಸೆನಾ " ಅಂದಿದ್ದೆ ತಡ ,ಶ್ಯಾಮ ಆ ಹೆಂಗಸಿನ ಬಳಿ ಬಂದು " ಅಕ್ಕವ್ರಾ,ಇದ್ ನಮ್ಮಪ್ಪಾವ್ರ ಹೇಳ್ ಕೊಟ್ಟಿದ್ರಿ,ಇದ್ ಏನ್ ಶಾನ ಕಷ್ಟ್ ಇಲ್ರಿ,ನೀವೂ ಮನಿಯಾಗ ಮಾಡ್ಬೋದ್ ನೋಡ್ರಿ " ಎಂದು ಹೇಳುತ್ತಾ ತನ್ನ ತಂದೆ ರುಚಿಯಾಗಿ ದೋಸೆಮಾಡಲು ಹೇಳಿಕೊಟ್ಟ ಸೂತ್ರವನೆಲ್ಲ ಹೆಂಗಸಿಗೆ ವಿವರಿಸಿದ.
ನಾರಾಯಣಪ್ಪನಿಗೆ ಶ್ಯಾಮನ ಹೋಟೆಲ್ ನ ಆದಾಯ ಯಾಕೆ ಕುಸಿಯಿತು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ." ಹಿಂಗಾ  ಬಂದರವರಿಗೆಲ್ಲ ದೋಸೆ ಮಾಡದ ಹೇಳ್ಕೊಟ್ರ,ಅವ್ರ ಮನೀಗಾ ಮಾಡ್ಕಂಡು ತಿನ್ತಾರಾ,ಇನ್ ಖಾನಾವಳಿಗ್  ಯಾಕ್ ಬರ್ತಾರ ,ಅಷ್ಟು ತಿಳಿಯಂಗಿಲ್ಲ,ಮಂಗನಂತದು " ಎಂದು ಶ್ಯಾಮನನ್ನು ಮನದಲ್ಲೇ ನಾರಾಯಣಪ್ಪ ಹಳಿದುಕೊಂಡನು.ತನ್ನ ಹೋಟೆಲ್ ಮಾಲಿಕತ್ವವನ್ನು ರಾಮನಿಗೆ ಕೊಡಲು ನಿರ್ಧರಿಸಿದನು.

ಆದ್ದರಿಂದ ಓದುಗರೇ,ತರಬೇತಿ ಎಂದಿಗೂ ಶಿಕ್ಷಣವಾಗುವುದಿಲ್ಲ,ಶಿಕ್ಷಣದ ಜೊತೆಯಲ್ಲಿ ವ್ಯವಹಾರ ಜ್ಞಾನ,ಲೋಕದ ಸೂಕ್ಷ್ಮಗಳೂ ಅರಿವಿರಬೇಕು.

ಅಭಿಲಾಷ್ ಟಿ ಬಿ
ತಿಪಟೂರು


ಹಾಲ ಕೊಳ್ಳಿರೋ ಗೋಪಿಯರ ಮನೆಯಲ್ಲಿ |

ಜಗದೋದ್ದಾರಕನಿಗೆ ಜೋಗುಳವಾಡಿದ ಮನೆಯಲ್ಲಿ|
ಹಾಲ ಕೊಳ್ಳಿರೋ||
ಜಗದಾನಂದಕಾರನು ಬೆಣ್ಣೆ ಮೊಸರು ಕದ್ದ ಮನೆಗಳಲ್ಲಿ |
ಹಾಲ ಕೊಳ್ಳಿರೋ ||
ಜಗದೊಡೆಯನಾದ ಉಡುಪಿಯ ಕೃಷ್ಣನು ,
ನಲಿದಾಡಿದ ಮನೆಗಳಲ್ಲಿ|
ಹಾಲ ಕೊಳ್ಳಿರೋ |

ಭೂಪಾಲನನ್ನು ಆಡಿಸಿದ ಕೈಗಳು ಕರೆದ ಹಾಲು|
ಭೂಪತಿ  ,ಸಿರಿಪತಿಗೆಂದು ಕರೆದ ಹಾಲು||
ಭೂಲೋಕದೊಡೆಯ ಭಾಮೆಯ ಅರಸನ|
ಕೊಳಲಿನ ನಾದವ ಕೇಳಿ ಬಸಿದ ಹಾಲು||

ಅಭಿಲಾಷ್ ಟಿ ಬಿ
ತಿಪಟೂರು
ಶ್ರೀಕೃಷ್ಣಾರ್ಪಣ ಮಸ್ತು  


ವರ್ಷಧಾರೆ....

ಊರಿನಲ್ಲಿ ಮಳೆಯಾಗಿ ಸುಮಾರು ವರುಷಗಳೇ ಆಗಿವೆ.ಕೆರೆ ತುಂಬಿದ್ದು ನೋಡಿದ್ದು ಸತ್ಯ ಮಾವನ ಕೊನೆ ತಂಗಿ ಮದ್ವೆಲೆ.ಆವಾಗ್ಲೇ ಕೆರೆ ತುಂಬಿದ್ದು ,ಭತ್ತ ಬೆಳೆದಿದ್ದು     ಎಲ್ಲ .ಈಗಾಗಲೇ ಸತ್ಯ ಮಾವನ ಮಗ ಶ್ರೀಕರ ಮತ್ತು ಅವರ ಕೊನೆ ತಂಗಿ ಮಗಳು ವರ್ಷನು ಮದ್ವೆಗೆ ಬಂದು ನಿಂತಿದ್ದಾರೆ.ಇನ್ನು ಯೋಚನೆ ಮಾಡಿ ,ನಮ್ಮ ಊರಿಗೆ ಮಳೆ ಬಂದು ಎಷ್ಟು ವರುಷವಾಯಿತೆಂದು.

ಊರಿಗೆ ಮಳೆಯಾಗಲೆಂದು ಊರಿನ ಗ್ರಾಮಸ್ಥರೆಲ್ಲ ಸೇರಿ ಗ್ರಾಮದೇವತೆಯಾದ ಕೆಂಪಮ್ಮನ ದೇವಸ್ಥಾನದಲ್ಲಿ ಚಂಡಿಯಾಗವನ್ನು ನೆರೆವೇರಿಸಲು  ತೀರ್ಮಾನಿಸಿದ್ದರು.ಆದ್ದರಿಂದ ಶ್ರೀಕರ ಮಾತು ವರ್ಷ ಗುರವಾರದ ರಾತ್ರಿ ಪಾಳಯದ ಕೆಲಸವನ್ನು ಮುಗಿಸಿಶುಕ್ರವಾರದ ಬೆಳಿಗ್ಗೆ ಬೆಂಗಳೂರಿನಿಂದ ತಿಪಟೂರಿನವರೆಗೆ ರೈಲಲ್ಲಿ ಜೊತೆಯಲ್ಲೇ ಬಂದು ಅಲ್ಲಿಂದ ನೇರವಾಗಿ ಕಲ್ಲೂರಿಗೆ ಬಂದು ಇಳಿದಿದ್ದರು.ಸತ್ಯ ಮಾವನೂ ಸೇರಿ ಎಲ್ಲರೂ ಆಗಲೇ ದೇವಸ್ಥಾನದ ಹೋಮದ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು.ಇಬ್ಬರೂ ಹೆಚ್ಚು ಸಮಯ ವ್ಯರ್ಥಮಾಡದೆ ಮಡಿಯುಟ್ಟು ದೇವಸ್ಥಾನದ ಕಡೆಗೆ ನಡೆದರು.ಶ್ರೀಕರ ಮಗುಟವನ್ನು ಉಟ್ಟಿದ್ದರೆ ,ವರ್ಷ ಸಾದಾ ಚೂಡಿದಾರ್ ತೊಟ್ಟಿದ್ದಳು.

ಪೂರ್ಣಾಹುತಿ ,ಊರ ಊಟ ಎಲ್ಲವೂ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಆಗಿತ್ತು.ಅದು ಸಂಜೆ ನಾಲ್ಕರಂತೆ ಕಾಣಲೇ ಇಲ್ಲ,ಆರು ಗಂಟೆಯ ಮೇಲೆಯೇ ಆಗಿದಂತಿತ್ತು.ಎಂದೂ ಕಾಣದ ಅಷ್ಟು ದಟ್ಟ ಮೋಡಗಳು ಕಲ್ಲೂರನ್ನು  ಆಕ್ರಮಿಸಿಕೊಂಡಿದ್ದವು.ಹಕ್ಕಿಗಳು ಆಗಲೇ ಗೂಡ ಸೇರಲು ಹೊರಟ್ಟಿದ್ದವು.ಗಾಳಿಯ ಜೊತೆಗೆ ಮರಗಳ ಹರಟೆಯ ಬಿಟ್ಟರೆ ಇಡೀ ಊರೇ ನಿಶ್ಯಬ್ದವಾಗಿತು.ಶ್ರೀಕರ ತನ್ನ ಪ್ರೀತಿಯ ಉಯ್ಯಾಲೆಮಣೆಯನ್ನು ತೂಗಿಕೊಳ್ಳುತಿದ್ದಾನೆ.ಸತ್ಯ ಮಾವ ಹಿತ್ತಲಿನಲ್ಲಿ ದನಗಳಿಗೆ ಕಾಯುತ್ತಿದ್ದಾರೆ.ವರ್ಷ ತನ್ನ ಪ್ರೀತಿಯ ಗಾಳಿಪಟವನ್ನು ಹಿಡಿದು ಶ್ರೀಕರನ ಮುಂದೆ ಹಾಜರಾದಳು.ಅವನಿಗೆ ದಾರಿಯೇ ಇರಲಿಲ್ಲ,ಸುಮ್ಮನೆ ಎದ್ದು ಹೊರಟ.ಇಬ್ಬರೂ ಮನೆಯ ಸೂರನ್ನು ದಾಟಿ ಹೊಲದ ಬಾರೆಯ ಕಡೆಗೆ ಹೊರಟರು.

ವರ್ಷ ವೃತ್ತಿಯಲ್ಲಿ ಸಾಪ್ಟ್ ವೇರ ಇಂಜಿನಿಯರ್,ದೇಶ ವಿದೇಶಗಳಿಗೆ ಮೋಡದ ಮೇಲೆ ಹಾರಿದ್ದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ.ಬೆಂಗಳೂರಿನಲ್ಲಿ ಇದ್ದರೂ ಅಷ್ಟೆ ,ತನ್ನ ಬೇಡಿಕೆಯನ್ನು ಗಾಳಿಪಟಕ್ಕೆ ನಿವೇದಿಸಿ ದೇವರಿಗೆ ತಲುಪಿಸು ಎಂದು ಆಕಾಶಕ್ಕೆ ಹಾರಿಬಿಡುವಳು.ಒಟ್ಟಿನಲ್ಲಿ ಹೇಳಬಹುದಾದರೆ ಅವಳು ಮುಗ್ದ ಬಾಲೆಯಷ್ಟೆ.

ಇಬ್ಬರೂ ಮಳೆಬಾರದೆ ಒಣಗಿ ಹೋಗಿದ್ದ ಹೆಸರುಗಿಡಗಳ ಮೇಲೆ ನಡೆದು ಹೋಗುತ್ತಿದ್ದರು.ಶ್ರಾವಣದ ನಾಗರಪಂಚಮಿಗೆ ಹಲವು ದಿನವೇನು ಉಳಿದಿರಲಿಲ್ಲ.ಅವರು ಹೊರಟಾಗಲೇ ಒಂದೆರೆಡು ಹನಿಗಳು ಆಕಾಶದಿಂದ ಉದುರಿತ್ತಿದ್ದವು.ಹೊಲದ ಬಾರೆ ಮೇಲೆ ನಿಂತು ಇಬ್ಬರೂ ಒಂದೊಂದು ಪಟವನ್ನು ಹಾರಿಸುತ್ತಾ ನಿಂತರು.ವರ್ಷಾಳ ಪಟ ಮೋಡ ವನೂ ಮುಟ್ಟಿತ್ತು.ಹಾರುತ್ತಾ ಹಾರುತ್ತಾ ಅದು ಕೈಯಿಂದ ಕಳಚಿ ಹೋಗಿತು.ಅವಳ ಅದನ್ನು ಹಾಗೆಯೇ ಬಿಟ್ಟು ಶ್ರೀಕರ ಕೈಯಲ್ಲಿದ ಪಟವನ್ನು ಹಾರಿಸಲು ಮುಂದಾದಳು.ಆಗಾಗ್ಗೆ ಹನಿಯುತ್ತಿದ್ದ ಮಳೆ,ಈಗ ಜಿಟಿ ಜಿಟಿ ಮಳೆ ಶುರುವಾಯಿತು.ಶ್ರೀಕರ ವರ್ಷ ಇಬ್ಬರೂ ಸೇರಿ ಪಟವನ್ನು ಹಾರಿಸುತ್ತಾ ನಿಂತರು.ಆಕಾಶವು ಮತ್ತೆ ಕಪ್ಪಿಟ್ಟವು.ಮಧ್ಯೆ ಮಧ್ಯೆ ಒಂದೆರೆಡು ಮಿಂಚುಗಳ ನಡುವೆ ಅಬ್ಬರಿಸಿದ ಸಿಡಿಲಿಗೆ ವರ್ಷ ಬೆಚ್ಚಿಬಿದ್ದು ಶ್ರೀಕರನ ಎದ್ದೆಯನ್ನಪ್ಪಿ ನಿಂತಳು.ಶ್ರೀಕರ ಗಾಳಿಪಟವನ್ನು ಆಕಾಶದಲ್ಲಿ ತೇಯಲು ಬಿಟ್ಟು ವರ್ಷಳನು ತಬ್ಬಿಹಿಡಿದನು.ಮುಂಗಾರಿನ ಮಳೆಯಲ್ಲಿ ಇಬ್ಬರೂ ನೆನೆದು ತೊಯ್ದರು.ಮೆಲ್ಲಗೆ ಅವಳ ಮುಂಗುರಳ ಸರಿಸಿ ಕಿವಿಯಲ್ಲಿ " ಮದ್ವೆ ಆಗೋಣೆನೆ " ಎಂದು ನುಡಿದನು.ವರ್ಷ ಒಡನೆಯೇ ಅವನಿಂದ ದೂರ ಸರಿದು " ಹೋಗೋ ,ನಿನ್ ಬಾಯಿ ವಾಸನೆ " ಎಂದು ನಾಚಿಕೆಯಿಂದ ಹೇಳಿ ಊರಕಡೆ ಓಡಿದಳು.ಮುಂದಿನ ವರ್ಷಧಾರೆಯ ಹೊತ್ತಿಗೆ ಇಬ್ಬರಿಗೂ ಜೀರಿಗೆಧಾರೆಯೂ ಮುಗಿದಿತ್ತು.


ಅಭಿಲಾಷ್ ಟಿ ಬಿ
ತಿಪಟೂರು


ಹಕ್ಕಿಗಳು ಹಾರುತಿವೆ....

ಹಕ್ಕಿಗಳು ಹಾರುತಿವೆ ನೋಡಿದಿರಾ |
ಮೋಡ ತುಂಬಿದ ಮುಗಿಲ ಅಂಗಳದಾಗ ||

ಹಳ್ಳದ ದಂಡೆಯ ಗೂಡಿಗೆ ಮರಳಿ ಹೊರಟಾವ|
ಬಾಯಲ್ಲಿ ಭತ್ತದ ಕಾಳುಗಳ ಚೀಲವ ತುಂಬಿಕೊಂಡಾವ||

ಗದ್ದೆ ಕೆಸರಿನಲ್ಲಿ ಮುಂಜಾವಿನಿಂದ ಬಹಳ ದಣಿದಾವ|
ಮಿಡತೆ ಕೀಟಗಳ ತಿಂದು ತೇಗಾವ||

ಮಳೆಬಿಲ್ಲಷ್ಟೆ ಬಣ್ಣವ ರೆಕ್ಕೆಗಳಿಗೆ ಹಚ್ಚಿಕೊಂಡಾವ|
ಮಳೆ ಬರವುದೆಂದು ,ಮಲೆಯ ಕಡೆಗೆ ಹೊರಟಾವ||

ಸಾಂಗತ್ಯ ಬಯಸಿ,ಸಂಗಾತಿಯ ಅರಸಿತು ಊರೂರ ಅಲೆಯುತ್ತಾ|
ಸಂಗಾತಿಯೊಡಗೂಡಿ ಸೃಷ್ಟಿಸಿತು ಮರಿ ಜೀವಗಳ ಸಂತಾನವೆಂಬ ನೆಪದಲ್ಲಾ||

ಅಭಿಲಾಷ್ ಟಿ ಬಿ
ತಿಪಟೂರು
ಕಥೆಯಲ್ಲ ,ಇದೇ " ಅರ್ಧನಾರೀಶ್ವರ " ಜೀವನ..... .

ಜಗಳವೋ ಜಗಳ,ಇವರ ಜಗಳಕ್ಕೆ ದೇವಲೋಕ,ವೈಕುಂಠ,ಭೂಲೋಕ,ಎಲ್ಲಾ ಲೋಕಗಳೂ ಅಲ್ಲಾಡಿ ಹೋಗಿತ್ತು.ಯಾರು ಎಷ್ಟು ಹೇಳಿದರೂ ಇಬ್ಬರೂ ಒಪ್ಪುವ ಹಾಗಿಲ್ಲ,ಒಟ್ಟಿನಲ್ಲಿ ಇಬ್ಬರಿಗೂ ಆಸ್ತಿ ಪಾಲಾಗಬೇಕು ಅಷ್ಟೆ.ಪಾರ್ವತಮ್ಮ ಅಂತು ದಿನ ಅತ್ತಿದ್ದೆ ,ಅತ್ತಿದ್ದು,ಪರಮೇಶ್ವರಪ್ಪನಂತು  ಸುತರಂ ಒಪ್ಪಲೇ ಇಲ್ಲ,ಅವನದು ಒಂದೇ ಮಾತು " ಆಸ್ತಿನ ಪಾಲು ಮಾಡಲ್ಲ " ಅಂತ.ಆದ್ರೂ ಗಣೇಶ ಸುಬ್ರಮಣ್ಯ ಮಾತ್ರ ಹೆಂಡತಿರಾ ಮಾತು ಕಟ್ಕಂಡು ದಿನಾ ಅಪ್ಪ ಅಮ್ಮನ ಜೊತೆ ಜಗಳ.ಒಟ್ಟಿನಲ್ಲಿ ಕೈಲಾಸ ಅಲ್ಲೋಲ ಕಲ್ಲೋಲವಾಗಿತ್ತು.

ಕೈಲಾಸದ ಜಗಳ ತನ್ನ ಮಿತಿಯನ್ನೂ ಮೀರಿದಾಗ ಪರಮೇಶ್ವರಪ್ಪ ತನ್ನ ಇಬ್ಬರು ಮಕ್ಕಳಿಗೂ ಸಮಾನವಾಗಿ ಆಸ್ತಿಯನ್ನು ಹಂಚಲು ನಿರ್ಧರಿಸಿದನು.ಅದಕ್ಕಾಗಿ ವೈಕುಂಠದಿಂದ ನಾರಾಯಣ,ಸತ್ಯಲೋಕದಿಂದ ಬ್ರಹ್ಮ,ಮಥುರಾದಿಂದ ಕೃಷ್ಣ,ಕಾಶಿಯಿಂದ ಕಾಲಭೈರವ,ಅಯೋಧ್ಯೆಯಿಂದ ಭರತ,ರಾಮ,ಲಕ್ಷ್ಮಣ ,ಗದಗದಿಂದ ವೀರನಾರಾಯಣ ಎಲ್ರೂ ಕೈಲಾಸಕ್ಕೆ ಬಂದು ಸೇರಿದರು.ಆಸ್ತಿ ಹಂಚಿಕೆ ಆರಂಭವಾದೊಡೆ ನಾರದ ಎಲ್ಲವನ್ನೂ ಸಮಾನವಾಗಿ ಹಂಚಲು ಆರಂಭಿಸಿದ. " ನೋಡಪ್ಪ ಗಣಪತಿ,ನಿನಗೆ ಇಡುಗಂಜಿ,ಆನೆಗುಡ್ಡೆ,ಬೆಳವಾಡಿ ಎಲ್ಲಾ ನಿನಗೆ ಸೇರುತ್ತೆ.ಹಾಗೆ ನಿನ್ನ ವಾಹನವಾದ ಮೂಷಿಕ ರೈಲ್ವೆ ಸ್ಟೇಷನ್,ಬಸ್ ಸ್ಟಾಂಡ್,ಹೋಟೆಲ್,ರಾಗಿ ಹೊಲ ಎಲ್ಲಾ ಕಡೆ ಇರುವುದರಿಂದ ಇವೆಲ್ಲವೂ ನಿನಗೇ ಸೇರತಕ್ಕದು.
ಹಾಗೆಯೇ ಮುಂದುವರೆದು ," ಸುಬ್ರಮಣ್ಯ ,ನಿನಗೆ ಪಳನಿ,ತರೀಕೆರೆ,ಘಾಟಿ,ಕುಕ್ಕೆ ಸಂಸ್ಥಾನಗಳು ನಿನಗೆ ..ಹಾಗೆ ತಮಿಳುನಾಡು,ಪಶ್ಚಿಮ ಘಟ್ಟದ ಕಾಡುಗಳು ಎಲ್ಲವೂ ನಿನಗೆ ಸೇರತಕ್ಕದು " ಎಂದು ಹೇಳಿದರು.

ನಾರದ ಆಸ್ತಿ ಹಂಚಿಕೆ ನೆರೆದಿದ್ದವರಿಗೆಲ್ಲ ಒಪ್ಪಿಗೆಯಾಗಿ ,ಗಣೇಶ ಸುಬ್ರಮಣ್ಯರಿಗೂ ಒಪ್ಪಿಗೆಯಾಯಿತು.ಕೊನೆಗೆ ಉಳಿದಿದ್ದರೆಂದರೆ " ಪಾರ್ವತಮ್ಮ,ಪರಮೇಶ್ವರಪ್ಪ" ?.ಮರೆತೇ ಹೋದನಲ್ಲ ಎಂದು ನಾರದರು ಯೋಚಿಸುತ್ತಿರುವಾಗಲೇ " ನಾನು ನಮ್ಮಮ್ಮನ ಕರೆದುಕೊಂಡು ಹೋಗ್ತೀನಿ " ಅಂತ ಗಣೇಶ," ನಾನು ನಮ್ಮಪ್ಪನ ಕರ್ಕಂಡು ಹೋಗ್ತೀನಿ " ಅಂತ ಸುಬ್ರಮಣ್ಯ ಹೇಳಿಯೇ ಬಿಟ್ಟರು.

ಅಂದೇ ತಮ್ಮ ಸಾಮಾನುಗಳನ್ನು ಗಣೇಶ,ಸುಬ್ರಮಣ್ಯ ಗಾಡಿಗೆ ಹೇರಿಕೊಳ್ಳುತ್ತಾರೆ.ನೆರೆದಿದ್ದ ದೇವಾನುದೇವತೆಗಳ ಆಶಿರ್ವಾದ ಪಡೆಯುತ್ತಾರೆ.ತಮ್ಮ ತಂದೆ ತಾಯಿಯರನ್ನು ಕರೆಯಲು ಹೋದಾಗ ಅವರಿಗೆ ಆಶ್ಚರ್ಯವೇ ಕಾದಿರುತ್ತದೆ .ಪರಮೇಶ್ವರನು ಅರ್ಧನಾರೀಶ್ವರನ ರೂಪದಲ್ಲಿ ಇರುತ್ತಾನೆ.ಗಣೇಶ ಸುಬ್ರಮಣ್ಯ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿ ತಂದೆ ತಾಯಿಯ ಬಳಿ ಕ್ಷಮೆಕೇಳುತ್ತಾರೆ.

ಆತ್ಮೀಯ ಓದುಗರೇ,ನಮ್ಮ ತಂದೆ ತಾಯಿಯರು ಕೂಡ ಪಾರ್ವತಿ ಪರಮೇಶ್ವರ ಸ್ವರೂಪವೇ.ದೇಹ ಬೇರೆಯಾದರೂ ಜೀವ ಒಂದೇ.ನನ್ನ ಸಂಸ್ಕೃತಿ,ಭಾರತೀಯತೆ.ನಾನು ನನ್ನ ತಂದೆ ತಾಯಿಯರನ್ನು ವಸ್ತುಗಳಂತೆ ಕಾಣದೆ,ದೇವತಾ ಸ್ವರೂಪವೆಂದು ಭಾವಿಸಿ ,ಅವರನ್ನು ನನ್ನ ಮಕ್ಕಳಿಗಿಂತಲೂ ಚೆನ್ನಾಗಿ ಕಾಪಾಡಿಕೊಳ್ಳುತ್ತೇನೆ ಎಂದು ಪಣತೊಡಿ.ವೃದ್ದಾಶ್ರಮದಲ್ಲಿ ಏನಾದರೂ ನಿಮ್ಮ ರತ್ನಗಳನ್ನು ಬಿಟ್ಟಿದ್ದರೆ ಇಂದೇ ಕರೆತನ್ನಿ.ಹಾಗೆಯೇ ತಂದೆ ತಾಯಿಯರಿಗಿಂತ ಬೇರೆ ಆಸ್ತಿ ಯಾವುದೂ ಇಲ್ಲ,ನಿಮ್ಮನ್ನು ಸಾಕಿ ಸಲುಹಿದ ನಿಮ್ಮ ಪೋಷಕರನ್ನು ನಿಮ್ಮ ಮಟ್ಟಿಗೆಯಾದರೂ ಪೋಷಿಸಿ.ತಂದೆ ತಾಯಿಯರಿಗೆ ಬೆಲೆ ಕಟ್ಟಬೇಡಿ

ಮುಗಿದಿಲ್ಲ,ಈಗಷ್ಟೇ ಆರಂಭವಾಗಿದೆ......

ಅಭಿಲಾಷ್ ಟಿ ಬಿ
ತಿಪಟೂರು